ಕುರಿಗಳು ಸಾರ್ ಕುರಿಗಳು...

- ಕೆ.ಎಸ್.ನಿಸಾರ್ ಅಹಮದ್

ಕುರಿಗಳು ಸಾರ್ ಕುರಿಗಳು ||
ಸಾಗಿದ್ದೇ ಗುರಿಗಳು

ಮಂದೆಯಲ್ಲಿ ಒಂದಾಗಿ ಸ್ವಂತತೆಯೇ ಬಂದಾಗಿ
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ದನಿ ಕುಗ್ಗಿಸಿ ತಲೆ ತಗ್ಗಿಸಿ ಅಂಡಲೆಯುವ ನಾವು ನೀವು

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕುಪಾಲಾಗಿ
ಹೇಗೆ ಹೇಗೋ ಏಗುತಿರುವ ಬರೀ ಕಿರುಚಿ ರೇಗುತಿರುವ
ನೊಣ ಕೂತರೆ ಬಾಗುತಿರುವ ತಿನ್ನದಿದ್ದರು ತೇಗುತಿರುವ
ಹಿಂದೆ ಬಂದರೊದೆಯದ ಮುಂದೆ ಬರಲು ಹಾಯದ
ನಾವು ನೀವು ಅವರು ಇವರು

ನಮ್ಮ ಕಾಯ್ವ ಕುರುಬರು||

ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು
ಜಮಾಬಂದಿಗಮಲ್ದಾರ ಬರಲು ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚ ಹಿರಿದು ಕತ್ತ ಕಚಕ್ಕೆಂದು ಕೊಚ್ಚಿ
ಬಿರಿಯಾನಿಯ ಮೆಹರುಬಾನಿಯ, ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರು ನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು

ಬಿಸಿಲಿನಲ್ಲಿ ನಮ್ಮ ದೂಡಿ, ಮರದಡಿಯಲಿ ತಾವು ಕೂತು
ಮಾತು ಮಾತು ಮಾತು ಮಾತು
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು

ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು

ತಳವೂರಿದ ಕುರುಬ ಕಟುಕನಾದ ಅವನ ಮಚ್ಚು
ಆಹ! ಏನು ಹೊಳಪು, ಏನು ಜಾದು, ಏನು ಮೋಹ!
ಕಣ್ಣು ಕುಕ್ಕಿ ಸೊಕ್ಕಿರುವ ಕತ್ತನದಕೆ ತಿಕ್ಕಿರುವ
ಹೋಗಿ ಹೋಗಿ ನೆಕ್ಕಿರುವ
ನಾವು ನೀವು ಅವರು ಇವರು
ಕುರಿಗಳು ಸಾರ್ ಕುರಿಗಳು!

Video link:
http://www.youtube.com/watch?v=SJjAkQAjtIU
http://www.youtube.com/watch?v=xk1kct9WI0A (SPB)
English lyrics:
http://www.madhurabhavageethegalu.blogspot.com/2013/07/kurigalu-saar-kurigalu.html

No comments:

Post a Comment

Note: Only a member of this blog may post a comment.